ನೂರು ಸಾರ್ಥಕ ವಸಂತಗಳನ್ನು ಪೂರೈಸಿ ಮೈಸೂರು ವಿಶ್ವವಿದ್ಯಾನಿಲಯವು ಪ್ರಗತಿಮುಖಿಯಾಗಿ ಮುನ್ನಡೆಯುತ್ತಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ಬೋಧನಾಂಗ, ಸಂಶೋಧನಾಂಗ, ಪ್ರಸಾರಾಂಗ, ಆಡಳಿತಾಂಗ - ಇವು ವಿಶ್ವವಿದ್ಯಾನಿಲಯದ ಬೆಳವಣಿಗೆಯ ಆಧಾರಸ್ತಂಭಗಳು. ನಮ್ಮ ವಿಶ್ವವಿದ್ಯಾನಿಲಯದ ಪ್ರಸಾರಾಂಗವು ವಿಶ್ವವಿದ್ಯಾನಿಲಯಕ್ಕೆ ಕೀರ್ತಿ ತಂದುಕೊಡುವಂಥ ಸುಮಾರು ೨೮೩೫ ಕೃತಿಗಳನ್ನು ಪ್ರಕಟಿಸಿರುವುದು ಹೆಮ್ಮೆಯ ಸಂಗತಿ. ಇದರಲ್ಲಿ ನೂರಾರು ಮಹತ್ವದ ಕೃತಿಗಳನ್ನು ಅದು ಪುನರ್ಮುದ್ರಣ ಕೂಡ ಮಾಡಿರುವುದು ಇನ್ನೂ ಸಂತಸದ ಸಂಗತಿ.
ಪ್ರಸ್ತುತ ಅಂತರ್ಜಾಲ ಆವೃತ್ತಿಯಾಗಿ ಹೊರಬರುತ್ತಿರುವ ‘ಪುರಾಣನಾಮ ಚೂಡಾಮಣಿ’ ಕೃತಿಯು ಪ್ರಾತಃಸ್ಮರಣೀಯ ವಿದ್ವಾಂಸರಾದ ಬೆನಗಲ್ ರಾಮರಾವ್ ಹಾಗೂ ಪಾನ್ಯಂ ಸುಂದರಶಾಸ್ತ್ರಿಗಳ ವಿದ್ವತ್ ಸಾಹಸದ ಫಲವಾಗಿ ಹೊರಬಂದ ಮಹತ್ವಾಕಾಂಕ್ಷೆಯ ಮಹಾನ್ ಆಕರ ಗ್ರಂಥ. ಮುದ್ರಣ ಮಾಧ್ಯಮದಲ್ಲಿ ಈಗಾಗಲೆ ಹತ್ತು ಮುದ್ರಣಗಳನ್ನು ಕಂಡಿರುವುದು ಈ ಕೃತಿಯ ಜನಪ್ರಿಯತೆಯನ್ನು ಸೂಚಿಸುತ್ತದೆ.
ಭಾರತೀಯ ಪುರಾಣಪರಂಪರೆ ವೈವಿಧ್ಯಮಯವೂ ಸಮೃದ್ಧವೂ ಶ್ರೀಮಂತವೂ ಆಗಿದೆ. ಸಾಗರ ಸದೃಶವಾಗಿರುವ ಈ ಜ್ಞಾನವನ್ನು ವ್ಯಾಪಕವೂ ಆಳವೂ ಆದ ಅವಲೋಕನಕ್ಕೆ ಒಳಪಡಿಸಿ ಆಯ್ದ ಮುತ್ತುಗಳ ರಾಶಿಯಂತಿದೆ ಈ ಅನುಪಮ ಕೃತಿರತ್ನ. ನಮ್ಮ ಯುವ ಸಮುದಾಯ ನಮ್ಮ ಪ್ರಾಚೀನ ಪುರಾಣ ಪರಂಪರೆಯನ್ನು ಹೊಸ ಹೊಸ ದೃಷ್ಟಿಕೋನದಲ್ಲಿ ಅಧ್ಯಯನ ಮಾಡುತ್ತಿರುವುದು ಸಂತಸದ ಸಂಗತಿ. ಹೊಸಕಾಲದ ಅಗತ್ಯಕ್ಕೆ ತಕ್ಕಂತೆ ವಿದ್ಯುನ್ಮಾನ ಮಾಧ್ಯಮವನ್ನು ಬಳಸಿಕೊಂಡು ಈ ಕೃತಿಯನ್ನು ಜಗತ್ತಿನ ಮೂಲೆ ಮೂಲೆಯಲ್ಲಿರುವ ಆಸಕ್ತ ಸಹೃದಯಿಗಳಿಗೆ ತಲುಪಿಸುವ ಸಾಹಸವನ್ನು ಈ ಮೂಲಕ ಕೈಗೊಳ್ಳಲಾಗಿದೆ.
ನಮ್ಮ ವಿಶ್ವವಿದ್ಯಾನಿಲಯದ ಭೌತವಿಜ್ಞಾನ ವಿಭಾಗದ ಪ್ರೊ. ಶ್ರೀಧರ್ ಎಂ.ಏ. ಹಾಗೂ ಅವರ ತಂಡದವರು ಈ ವಿರಳ ಶೈಕ್ಷಣಿಕ ಕಾರ್ಯವನ್ನು ಪೂರೈಸಿದ್ದಾರೆ. ಇದಕ್ಕಾಗಿ ಪ್ರೊ. ಶ್ರೀಧರ್, ಡಾ. ಅನಿತಾ ಎಂ., ಡಾ. ಗೀತಾ ಡೀ.ವೀ., ಅಖಿಲೇಶ್ವರಿ ಪೀ., ಲೋಹಿತ್ ಟೀ.ಎನ್., ಚಾಂದಿನಿ ಕೇ.ಎಂ., ಅವರನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಪ್ರಸಾರಾಂಗದ ಇಂಥ ವಿರಳ ಕೃತಿಗಳನ್ನು ಅಂತರ್ಜಾಲ ಆವೃತ್ತಿಯಾಗಿ ಪ್ರಕಟಿಸಲು ಕಾರ್ಯೋನ್ಮುಖರಾಗುವಂತೆ ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಎನ್.ಎಂ. ತಳವಾರ ಅವರಿಗೆ ಈ ಮೂಲಕ ಸೂಚಿಸುತ್ತ ಇದಕ್ಕಾಗಿ ವಿಶ್ವವಿದ್ಯಾನಿಲಯ ಎಲ್ಲ ನೆರವನ್ನೂ ನೀಡುತ್ತದೆ ಎಂಬುದಾಗಿಯೂ ಭರವಸೆ ಕೊಡುತ್ತೇನೆ. ಮತ್ತೊಮ್ಮೆ ಪ್ರೊ. ಶ್ರೀಧರ್ ಹಾಗೂ ಅವರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ವಿಜಯದಶಮಿ ೨೦೨೦ | ಪ್ರೊ. ಜಿ. ಹೇಮಂತ ಕುಮಾರ್ ಕುಲಪತಿ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು |