ಪುರಾಣನಾಮ ಚೂಡಾಮಣಿ

ಪ್ರಕಾಶಕರ ಮಾತು‌

‘ಪುರಾಣನಾಮ ಚೂಡಾಮಣಿ’ ಮೈಸೂರು ವಿಶ್ವವಿದ್ಯಾನಿಲಯ ಪ್ರಸರಾಂಗದ ಹೆಮ್ಮೆಯ ಪ್ರಕಟಣೆಗಳಲ್ಲೊಂದಾಗಿದೆ. ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ಈ ಆಕರ ಕೃತಿಯನ್ನು ಶ್ರೀಯುತರಾದ ಬೆನಗಲ್ ರಾಮರಾವ್ ಹಾಗೂ ಪಾನ್ಯಂ ಸುಂದರಶಾಸ್ತ್ರಿಗಳು ರಚಿಸಿದ್ದು ಇದು ಈಗಾಗಲೆ ಐದು ಮುದ್ರಣಗಳನ್ನು ಕಂಡಿದೆ. ಪುರಾಣಗಳಲ್ಲಿ ಆಯಾಯ ಸಮುದಾಯದ ಜ್ಞಾನ ಅಂತರ್ಗತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಾವುದೇ ನಾಡಿನ ಬೌದ್ಧಿಕ ಬೆಳವಣಿಗೆ, ಸಂಸ್ಕೃತಿಯ ಸಂರಕ್ಷಣೆ ಮತ್ತು ಸಂವಹನದ ದೃಷ್ಟಿಯಿಂದ ಪೌರಾಣಿಕ ಪ್ರಜ್ಞೆ ಅತ್ಯಂತ ಅಪೇಕ್ಷಣೀಯವಾಗಿದೆ. ರಾಮಾಯಣ, ಮಹಾಭಾರತ, ಉಪನಿಷತ್ತುಗಳು, ಪುರಾಣಗಳು ಮುಂತಾದ ಗ್ರಂಥಗಳಲ್ಲಿ ಪ್ರಾಚೀನ ಭಾರತೀಯರ ಜ್ಞಾನ, ಅನುಭವ, ಸಂಸ್ಕಾರ ಹಾಗೂ ಜೀವನ ವಿಧಾನಗಳು ಹರಳುಗಟ್ಟಿರುತ್ತವೆ. ಇವುಗಳ ಬಗ್ಗೆ ಜಿಜ್ಞಾಸೆ ಬೆಳೆಸಿಕೊಳ್ಳುವುದು, ಹೊಸ ಓದಿನಿಂದ ಹೊಸ ಅರ್ಥಗಳನ್ನು ಕಂಡುಕೊಳ್ಳುವುದು ಸಂಸ್ಕೃತಿಯ ಅಧ್ಯಯನದ ದೃಷ್ಟಿಯಿಂದ ಅತಿಮುಖ್ಯವೆನಿಸುತ್ತದೆ. ಈ ಹಿನ್ನೆಲೆಯಲ್ಲಿ ಒಂದು ಆಕರಗ್ರಂಥವಾಗಿ ಇದು ಅತ್ಯಂತ ಉಪಯುಕ್ತವಾದ ಕೃತಿಯಾಗಿದೆ.

ಇಂದಿನ ತರುಣ ಜನಾಂಗ ನಮ್ಮ ಪ್ರಾಚೀನ ವಿದ್ಯೆ, ಸಾಹಿತ್ಯ ಸಿರಿ, ಸಂಸ್ಕೃತಿಯ ಬಗ್ಗೆ ವಿಶೇಷ ಅಧ್ಯಯನಾಸಕ್ತಿ ತೋರುತ್ತಿರುವ ಹಿನ್ನೆಲೆಯಲ್ಲಿ ಹೊಸ ಕಾಲದ ತಂತ್ರಜ್ಞಾನವನ್ನು ಬಳಸಿಕೊಂಡು ಈ ಕೃತಿಯ ಆನ್‌ಲೈನ್ ಆವೃತ್ತಿಯನ್ನು ಹೊರತರಲಾಗುತ್ತಿದೆ. ಇದು ಮೈಸೂರು ವಿಶ್ವವಿದ್ಯಾನಿಲಯ ಪ್ರಸಾರಾಂಗದ ಇತಿಹಾಸದಲ್ಲಿ ಒಂದು ಹೊಸ ಹೆಜ್ಜೆ. ಆನ್‌ಲೈನ್ ಆವೃತ್ತಿಯಾಗಿ ಪ್ರಸಾರಾಂಗ ಹೊರತರುತ್ತಿರುವ ಪ್ರಥಮ ಕೃತಿಯಿದಾಗಿದೆ.

ತಂತ್ರಜ್ಞಾನದ ಬೆಳವಣಿಗೆ ಓದು ಬರಹದ ಕ್ಷೇತ್ರದಲ್ಲೂ ವ್ಯಾಪಕವಾದ ಬದಲಾವಣೆಗಳನ್ನು ತರುತ್ತಿದೆ. ಮೊದಲಿನಂತೆ ಇಂದು ಪೆನ್ನು ಹಿಡಿದು ಬರೆಯಬೇಕಾಗಿಲ್ಲ, ಪುಸ್ತಕ ಹಿಡಿದು ಓದಬೇಕಾಗಿಲ್ಲ. ವಿದ್ಯುನ್ಮಾನ ತಂತ್ರಜ್ಞಾನ ಬಳಸಿಕೊಂಡು ಬರೆಯಬಹುದಾಗಿದೆ ಮತ್ತು ಓದಬಹುದಾಗಿದೆ. ಇಂದು ಈ ವಿಧಾನ ಹೆಚ್ಚು ಹೆಚ್ಚು ಚಾಲ್ತಿಗೆ ಬರುತ್ತಿದೆ. ಸಮಕಾಲೀನ ಸಂದರ್ಭದ ಈ ಪ್ರವೃತ್ತಿಯನ್ನು ಅರಿತುಕೊಂಡು ಪ್ರಸಾರಾಂಗ ಕೂಡ ‘ಅಪ್‌ಟುಡೇಟ್’ ಆಗಲು ಈ ಪ್ರಯತ್ನವನ್ನು ಕೈಗೊಂಡಿದೆ. ನಮ್ಮ ಈ ಸಂಕಲ್ಪವನ್ನು ಕ್ರಿಯಾತ್ಮಕಗೊಳಿಸಿದವರು ನಮ್ಮ ವಿಶ್ವವಿದ್ಯಾನಿಲಯದ ಭೌತವಿಜ್ಞಾನ ವಿಭಾಗದ ಪ್ರಾಧ್ಯಾಪಕರಾದ ಡಾ. ಶ್ರೀಧರ್‌ ಹಾಗೂ ಅವರ ಸಂಶೋಧನ ವಿದ್ಯಾರ್ಥಿಗಳ ತಂಡ. ಆ ತಂಡದಲ್ಲಿದ್ದ ಸಾಧಕರ ಪಟ್ಟಿ ಹೀಗಿದೆ :

ಈ ತಂಡ ಕೇವಲ ಯಾಂತ್ರಿಕವಾಗಿ ಈ ಕಾರ್ಯವನ್ನು ಪೂರೈಸಿಲ್ಲ ಎಂಬುದು ನಾನಿಲ್ಲಿ ಒತ್ತಿ ಹೇಳಲೇಬೇಕಾಗಿದೆ. ಪ್ರಸ್ತುತ ಕೃತಿಯ ಐದನೆಯ ಮುದ್ರಣವನ್ನು ಇವರು ಅಂತರ್ಜಾಲಕ್ಕೆ ಅಳವಡಿಸುವಲ್ಲಿ ಆ ಆವೃತ್ತಿಯಲ್ಲಿ ಕಣ್ ತಪ್ಪಿನಿಂದ ಉಳಿದ ಬಹಳಷ್ಟು ಅಚ್ಚಿನ ದೋಷಗಳನ್ನು ತಿದ್ದಿದ್ದಾರೆ ಮತ್ತು ಉದ್ದಕ್ಕೂ ಮೊದಲ ಮುದ್ರಣದ (೧೯೪೧) ಆವೃತ್ತಿಯನ್ನು ಅವಲೋಕಿಸಿದ್ದಾರೆ. ಅಲ್ಲದೆ ಮುದ್ರಿತ ಆವೃತ್ತಿಯಲ್ಲಿನ ಸಂಕೇತಾಕ್ಷರಗಳಲ್ಲಿರುವ ಕೃತಿಗಳ ವಿವರಗಳನ್ನು ಇಲ್ಲಿ ಹೆಚ್ಚುವರಿಯಾಗಿ ಓದುಗರಿಗೆ ಒದಗಿಸಿದ್ದಾರೆ. ಇದು ಕನ್ನಡದ ಮೇಲಿನ ನೈಜ ಪ್ರೀತಿ-ಅಭಿಮಾನದಿಂದ ಮಾಡಿದ ಮಹತ್ಕಾರ್ಯ. ಈ ಅಪರೂಪದ ಕಾರ್ಯಕ್ಕಾಗಿ ಮೇಲೆ ಕಾಣಿಸಿದ ತಂಡವನ್ನು ನಾನು ವಿಶ್ವವಿದ್ಯಾನಿಲಯದ, ಪ್ರಸಾರಾಂಗದ ಪರವಾಗಿ ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈ ಪ್ರಯತ್ನಕ್ಕೆ ಪ್ರೇರಣಾದಾಯಕರಾಗಿ ತಂಡಕ್ಕೆ ಪ್ರೋತ್ಸಾಹ ತುಂಬಿದ ನಮ್ಮ ಮಾನ್ಯ ಕ್ರಿಯಾಶೀಲ ಕುಲಪತಿಗಳಿಗೆ ಗೌರವಾದರದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ವಾಚಕರು ಇದರ ಅನುಕೂಲ ಪಡೆಯಲೆಂದು ಆಶಿಸುತ್ತೇನೆ.

ವಿಜಯದಶಮಿ
೨೦೨೦
ಪ್ರೊ. ಎನ್. ಎಂ. ತಳವಾರ
ನಿರ್ದೇಶಕ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು