ಸಂಸ್ಕೃತ ಭಾಷೆಯಲ್ಲಿ ಪ್ರಚುರವಾಗಿರುವ ಪುರಾಣಗಳಲ್ಲಿಯೂ ಇತಿಹಾಸಗಳಲ್ಲಿಯೂ ಕಾಣಬರುವ ದೇವತೆಗಳು, ಋಷಿಗಳು, ಪುಣ್ಯಕ್ಷೇತ್ರಗಳು, ಪರ್ವತಗಳು, ನದಿಗಳು, ದೇಶಗಳು, ರಾಜರುಗಳು, ಅವರವರ ಕಾಲದ ವೈಚಿತ್ರ್ಯಗಳು, ಮಹತ್ವಗಳು ಮುಂತಾದುವುಗಳ ವಿಷಯವಾದ ಕಥೆಗಳನ್ನು ವಾಙ್ಮಯಾಭ್ಯಾಸದ ಸೌಕರ್ಯಕ್ಕಾಗಿ ಸ್ವಲ್ಪಮಟ್ಟಿಗಾದರೂ ತಿಳಿಯಪಡಿಸಲು ಅನುಕೂಲಿಸುವ ಪುಸ್ತಕವೊಂದು ಕನ್ನಡ ವಿದ್ಯಾರ್ಥಿಗಳಿಗೆ ಆವಶ್ಯಶಕವೆಂಬ ಭಾವನೆಯಿಂದ ಪುರಾಣನಾಮ ಚೂಡಾಮಣಿ ಎಂಬ ಸುಲಭ ಶೈಲಿಯ ಈ ಪುಸ್ತಕವನ್ನು ರಚಿಸಲು ಸುಮಾರು ಹನ್ನೆರಡು ವರ್ಷಗಳಿಗೆ ಹಿಂದೆ ಕೈಕೊಂಡುದಾಯಿತು. ಈ ಗ್ರಂಥವನ್ನು ರಚಿಸುವಲ್ಲಿ, ಜನಸಾಮಾನ್ಯದಲ್ಲೆಲ್ಲ ಪ್ರಸಿದ್ಧವಾಗಿರುವ ರಾಮಾಯಣ, ಭಾರತ, ಭಾಗವತಗಳೊಳಗಣ ಮುಖ್ಯ ಕಥಾ ಭಾಗಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಮಾತ್ರವೇ ಅಲ್ಲದೆ ದೇವೀಭಾಗವತ, ಮಾರ್ಕಂಡೇಯ ಪುರಾಣ, ಹರಿವಂಶ, ಲಿಂಗ ಪುರಾಣ, ಸ್ಕಂದ ಪುರಾಣ, ಆಧ್ಯಾತ್ಮ ರಾಮಾಯಣ, ತತ್ತ್ವಸಂಗ್ರಹ ರಾಮಾಯಣ ಮುಂತಾದ ಇನ್ನೂ ಕೆಲವು ಗ್ರಂಥಗಳಲ್ಲಿನ ವಿಷಯಗಳನ್ನೂ ತಕ್ಕಮಟ್ಟಿಗೆ ಅಲ್ಲಲ್ಲಿ ಅಡಕವಾಗಿ ಸಂಗ್ರಹಿಸಲಾಗಿದೆ. ಈ ಕಾರ್ಯವನ್ನು ಪೂರೈಸುವಲ್ಲಿ ಆ ಆ ಮೂಲಗ್ರಂಥಗಳನ್ನು ಧಾರಾಳವಾಗಿ ಪರಿಶೀಲಿಸಿರುವುದಷ್ಟೇ ಅಲ್ಲದೆ, ಆ ವಿಷಯಕವಾದ ಸಂಸ್ಕೃತ, ಇಂಗ್ಲಿಷ್, ಮರಾಠಿ, ಹಿಂದೀ, ತೆಲುಗು ಕೋಶಗಳನ್ನು ಕೂಡ ಯಥೋಚಿತವಾಗಿ ಉಪಯೋಗಿಸಿಕೊಂಡಿದ್ದೇವೆ. ಯಾವ ವಿಷಯವು ಯಾವ ಗ್ರಂಥದ, ಯಾವ ಭಾಗದ, ಎಷ್ಟನೆಯ ಅಧ್ಯಾಯ ಅಥವಾ ಸರ್ಗದಲ್ಲಿದೆಯೆಂಬುದನ್ನು ಆ ಆ ವಿಷಯಗಳ ಪಕ್ಕದಲ್ಲಿಯೇ ಚೌಕಕಂಸಗಳಲ್ಲಿ ಸೂಚಿಸಿದೆ. ತುಂಬ ಪರಿಶ್ರಮದಿಂದ ನಿರ್ಮಿತವಾದ ಈ ಕೋಶಗ್ರಂಥವು ಕನ್ನಡ ವಾಙ್ಮಯದಲ್ಲಿ ಹೆಚ್ಚು ಆದರವುಳ್ಳ ಸಮಸ್ತರಿಗೂ ಪ್ರಯೋಜನಕಾರಿಯಾಗುವುದೆಂಬುದಾಗಿ ನಂಬುತ್ತೇವೆ.
ಈ ಕೋಶವು ಪರಿಪೂರ್ಣವಲ್ಲವೆಂದು ಕೆಲವರೂ ಅಪ್ರಸಿದ್ಧವಾದ ಹೆಸರುಗಳನ್ನು ಬಿಟ್ಟುಬಿಟ್ಟಿದ್ದರೆ ಚೆನ್ನಾಗಿರುತ್ತಿದ್ದಿತೆಂದು ಬೇರೆ ಕೆಲವರೂ ಆಕ್ಷೇಪಿಸುವ ಸಂಭವವಿದೆ. ಈ ಎರಡು ವಿಧವಾದ ಆಕ್ಷೇಪಣೆಗಳಿಗೂ ಅಷ್ಟೊಂದು ಅವಕಾಶಕೊಡಲಾಗದೆಂಬ ಭಾವನೆಯಿಂದ ನಾವು ಚೆನ್ನಾಗಿ ಆಲೋಚಿಸಿ, ಮಧ್ಯಸ್ಥವಾದ ಒಂದು ಮಾರ್ಗವನ್ನು ಅನುಸರಿಸಲು ಪ್ರಯತ್ನಿಸಿರುವೆವು. ಬೌದ್ಧ, ಜೈನ, ಲಿಂಗಾಯತ, ವಿಶಿಷ್ಟಾದ್ವೈತ ಮತಗಳಿಗೆ ಹಾಗೂ ಇತ್ತೀಚೆಗೆ ಕನ್ನಡ ವಾಙ್ಮಯದಲ್ಲಿ ಕಾಣಬರಲಾರಂಭವಾಗಿರುವ ಕ್ರೈಸ್ತ ಮತ್ತು ಮಹಮ್ಮದೀಯ ಮತಗಳಿಗೆ ವಿಶೇಷವಾಗಿ ಸಂಬಂಧಪಟ್ಟ ಮಹಾವ್ಯಕ್ತಿಗಳ ಮತ್ತು ಪುಣ್ಯಸ್ಥಳಗಳ ವಿವರಗಳನ್ನೂ ಈ ಪುಸ್ತಕದಲ್ಲಿ ಸೇರಿಸಬೇಕೆಂಬ ಒಂದು ಅಪೇಕ್ಷೆ ನಮಗೆ ಇಲ್ಲದಿರಲಿಲ್ಲ. ಕನ್ನಡ ವಾಙ್ಮಯದ ವಿಸ್ತಾರವಾದ ಅಭ್ಯಾಸಕ್ಕೆ ಈ ವಿಷಯಗಳನ್ನು ಕೂಡ ತಿಳಿದಿರಬೇಕಾದುದು ಅಗತ್ಯವೇ ಸರಿ. ಆದರೆ ವಿಸ್ತಾರ ಭಯದಿಂದ ಈ ವಿಷಯದಲ್ಲಿ ಮುಂದುವರಿಯಲು ಧೈರ್ಯಪಡಲಿಲ್ಲ. ಇದಲ್ಲದೆ ಒಂದೇ ಹೆಸರಿನ ವ್ಯಕ್ತಿಯ ಸ್ಥಾನಮಾನಗಳು ಬೇರೆ ಬೇರೆ ಮತದವರ ದೃಷ್ಟಿಕೋನದಲ್ಲಿ ಏಕರೂಪವಾಗಿ ಅಥವಾ ಸಮಾನವಾಗಿರುವುದಿಲ್ಲವೆಂಬುದರಿಂದ, ಹೀಗೆ ಇದೇ ಪುಸ್ತಕದಲ್ಲಿ ಇವನ್ನೆಲ್ಲ ಕಲಬೆರಿಕೆ ಮಾಡುವುದು ವಿದ್ಯಾರ್ಥಿಗಳಿಗೆ ಉಪಕಾರಕವಾಗುವುದರ ಬದಲಾಗಿ ಅಪಕಾರಕವೇ ಆಗಬಹುದೆಂಬ ಶಂಕೆಯೂ ಬಂದಿತು. ಇನ್ನು ಇಂತಹ ಪುಸ್ತಕವನ್ನು ಪ್ರತ್ಯೇಕವಾಗಿ ಸಿದ್ಧಗೊಳಿಸುವುದು ಕೂಡ, ಆ ಆ ಪಂಗಡಗಳಿಗೆ ಸೇರಿದ ಅಥವಾ ಆ ಆ ಮತದವರ ಧರ್ಮಗ್ರಂಥಗಳನ್ನು ಗಾಢವಾಗಿ ಅಭ್ಯಸಿಸಿದವರಾದ ಪಂಡಿತೋತ್ತಮರುಗಳ ಒಂದು ಮಂಡಲಿಗೆ ಒಪ್ಪಿಸುವುದೇ ಕ್ಷೇಮಕರವೆಂದೂ ನಮಗೆ ತೋರಿತು.
ಈ ಕೋಶವು ಮುಗಿದು ಕೆಲವು ವರ್ಷಗಳಾದರೂ ಎಷ್ಟೋ ಬಗೆಯ ಅಡಚಣೆಗಳಿಂದ ಬೇಗನೆ ಹೊರಬೀಳದೆ ನಿಂತಿದ್ದಿತು. ಇಂತಹ ಸ್ಥಿತಿಯಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಗಣ್ಯ ಸದಸ್ಯರೂ ಕನ್ನಡ ಶಾಖೆಯ ಪ್ರಧಾನ ಪ್ರತಿನಿಧಿಗಳೂ ಉದ್ದಾಮ ಪಂಡಿತರೂ ಭಾಷಾಭಿಮಾನಿಗಳೂ ಆದ ರಾಜಸೇವಾಸಕ್ತ ಪ್ರೊ. ಶ್ರೀಮಾನ್ ಬೀ. ಎಂ. ಶ್ರೀಕಂಠಯ್ಯ, ಎಂ.ಏ., ಬೀ.ಎಲ್., ಅವರು ಈ ಗ್ರಂಥದ ಪ್ರಾಮುಖ್ಯತೆಯನ್ನು ಗಮನಿಸಿ, ನಮಗೆ ಪ್ರೋತ್ಸಾಹವಿತ್ತರು ಮತ್ತು ಅವರ ಬೆಂಬಲದಿಂದಲೇ ಈ ಕೋಶವು ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಗ್ರಂಥಮಾಲೆಯ ಒಂದು ಪುಷ್ಪವಾಗಿ ಅರಳಲು ಅವಕಾಶವಾಯಿತೆಂದು ಹೇಳಲು ತುಂಬ ಸಂತೋಷವಾಗುತ್ತಿದೆ.
ಸಾಧ್ಯವಾದಮಟ್ಟಿಗೂ ಪ್ರಮಾದ ಸ್ಖಾಲಿತ್ಯಾದಿ ದೋಷಗಳು ತಲೆದೋರದಿರುವಂತೆ ಬಹಳ ಜಾಗರೂಕತೆಯಿಂದ ವಿಷಯಗಳನ್ನು ವರ್ಣಿಸಿರುವೆವು. ಒಂದು ವೇಳೆ ಲೋಪದೋಷಗಳೇನಾದರೂ ಕಂಡುಬಂದಲ್ಲಿ, ವಾಚಕರು ದಯವಿಟ್ಟು ತಿಳಿಸುವುದಾದರೆ ಮುಂದಣ ಮುದ್ರಣದಲ್ಲಿ ಅವನ್ನು ಸರಿಪಡಿಸಲು ಅನುಕೂಲವಾಗಬಹುದು.
ಕನ್ನಡದಲ್ಲಿ ಇದುವರೆಗೆ ಹುಟ್ಟಿರದಂಥ ಈ ಗ್ರಂಥವು ವಿದ್ಯಾರ್ಥಿ ಬಾಲಬಾಲಿಕೆಯರ ಮಟ್ಟಿಗಾದರೂ ಉಪಯುಕ್ತವಾಗುವುದಾಗಿ ತಿಳಿದರಾದರೆ, ಕನ್ನಡ ತಾಯಿಯ ಸೇವೆಗಾಗಿ ಪಟ್ಟ ಗ್ರಂಥಕರ್ತೃಗಳ ಶ್ರಮವು ಪರಿಪೂರ್ಣ ಫಲವಿತ್ತಂತೆಯೇ ಎಂದು ಭಾವಿಸುವೆವು.
ಬೆನಗಲ್ ರಾಮರಾವ್
ವಿದ್ವಾನ್ ಪಾನ್ಯಂ ಸುಂದರಶಾಸ್ತ್ರಿ
೨೨.೦೯.೧೯೪೧
ಬೆಂಗಳೂರು